Wednesday, August 14, 2013

ಓ ನನ್ನ ಭಾರತೀಯ.........

ಭಾರತವೆಂಬ ಪುಣ್ಯಭೂಮಿಯಲಿ
ಜನಿಸಿದ ನಾವೇ ಧನ್ಯರು;
ಜನ್ಮಜನ್ಮಗಳ ಪುಣ್ಯದ ಫಲವಿದು,
ನಾವುಗಳೇ ಭಾಗ್ಯವಂತರು!


ಸುಖದಿಂದಿರುವೆವು ನಾವಿಂದೆಂದರೆ,
ಕಾರಣವಿಹುದು ಅದಕೊಂದು;
ಸುಖದ ಹೇರಿನ ಖುಷಿಯ ಹಿಂದೆ,
ವ್ಯಥೆಯ ಕಥೆಯು ಇಹುದೊಂದು!


ಬಂದರು ಬಿಳಿಯರು ವ್ಯಾಪಾರ ಮಾಡಲು,
ಇಲ್ಲಿನ ಸಿರಿಯನು ಕೊಳ್ಳೆ ಹೊಡೆಯಲು;
ಮೋಸದ ಪರಿವೆಯೇ ಇಲ್ಲದ ಜನರು,
ಬಿಳಿಯರ ಕೈಯ್ಯಲಿ ಗೊಂಬೆಯಾದರು!

ಆಳಿದರವರು ಇನ್ನೂರು ವರ್ಷ!
ಕಿತ್ತುಕೊಂಡರು ಭಾರತೀಯರ ಹರ್ಷ;
ಎಚ್ಚೆತ್ತರಾಗಲೇ ಮಾತೆಯ ಕುವರರು,
ಭಾರತಾಂಬೆಯ ನಲ್ಮೆಯ ಮಣಿಯರು.

ವೀರಯೋಧರು, ದೇಶಭಕ್ತರು,
ದಣಿವನರಿಯದೆ ಹೋರಾಡಿದರು!
‘ರಕ್ತ ತರ್ಪಣ’ದ ಅರ್ಪಣೆ ನೀಡಿ,
ಮಾತೃಭೂಮಿಯನು ಮರಳಿ ಪಡೆದರು!

ಓರ್ವರೀರ್ವರೇ? ನೂರಾರಿಹರು!
ಅವರ ಹೆಸರ ಹೇಳಲು ಸಾಲದು ಸಾಲು;
ಭಾರತ ಮಾತೆಯ ವೀರಪುತ್ರರು,
ದೇಶಕ್ಕಾಗಿ ಮಣ್ಣಲ್ಲೇ ಮಣ್ಣಾದವರು.

ಓ ನನ್ನ ಭಾರತೀಯರೆ!
ಬನ್ನಿರಿ ಸ್ವಾತಂತ್ರ್ಯವ ಸಂಭ್ರಮಿಸೋಣ!
ಭಾರತಮಾತೆಯು ಬಂಧನದಿಂದ
ಮುಕ್ತವಾದ ‘ಆ’ ದಿನವ ನೆನೆಯೋಣ…..

                                                                                             
 -ಪ್ರಣವ
                                                                         

Wednesday, June 5, 2013

ನಿನ್ನಯ ಪ್ರತೀಕ್ಷೆಯಲಿ........


ನಿನ್ನ ಕಮಲದಂತಹ ನಯನಗಳು,
ಸೆಳೆದಿವೆ ಕಣ್ಮನವನು;
ಮನಸೂರೆಗೊಳ್ಳುವ ಆ ನೋಟಗಳು,
ಕದ್ದಿವೆ ನನ್ನಯ ಮನವನು!


ರೇಶ್ಮೆಯಂತಹ ನಿನ್ನ ಕೇಶರಾಶಿ,
ರವಿಯ ರಶ್ಮಿಯನು ಪ್ರತಫಲಿಸುತಲಿ,
ಅತ್ತಿಂದಿತ್ತಲಿ ಓಲಾಡುತಲಿ, ಬೆಳಕನು ಬಳಿಬಾರೆನನ್ನುತಲಿ;
ಅರಿಯಲು ನಿನ್ನಯ ಇಂಗಿತವನು, ಬಂದನಾಗಸದಿ ಶಶಿ.



ಶಶಿಯ ಇದಿರಲೂ ಪ್ರಜ್ವಲಿಸುತ್ತ,
ಅರಿಯಲ್ಗೊಡದಿರು ನಿನ್ನಯ ಚಿತ್ತ;
ನಕ್ಷತ್ರಗಳನು ಮೈಮರೆಸುತ್ತ,
ಮುತ್ತನಿಕ್ಕಿ ಮುತ್ತಾಗಿಸವನು, ಇಳೆಗಿಳಿಸುತ್ತ!


ಬಿಳಿಯ ಹತ್ತಿಯ ಬೊಂಬೆಯು ನೀನು!
ಶುಭ್ರಶ್ವೇತೆಯ ದ್ವಿತ್ವಳು ನೀನು!
ಕಾಯುತಲಿರುವೆ ನಿನಗಾಗಿ ನಾನು,
ತಡಮಾಡದೆ ನನ್ನವಳಾಗಿನ್ನು.


ನೀ ಮನಸೆಳೆವ, ಮಂದಹಾಸವ ಬೀರುತಲಿ,
ನನ್ನ ಮನದ ಗೂಡಿನ ಕದವನು ತೆರೆಯುತಲಿ,
ಸದ್ದನು ಮಾಡದೆ ಎದೆಯೊಳಗೆ ಹೆಜ್ಜೆಯನಿಟ್ಟು,
ನನ್ನಲೆ ಒಂದಾಗಿ ಬೆರೆಯುತಲಿ;
ಹಾಡಿನಲಿಯಿತೀನನ್ನ ಮನ!
ಇತ್ತದು, ನಿನ್ನಯ ನಿರೀಕ್ಷೆಯಲಿ!

ನಿನ್ನಯ ಪ್ರತೀಕ್ಷೆಯಲಿ !
ನಿನ್ನದೇ ಪ್ರತೀಕ್ಷೆಯಲಿ !
ಪ್ರಣವ
04/06/13
10:24 P.M - 12:23 A.M

Tuesday, May 28, 2013

ದೂರದ ಕಣಿವೆಯ ನಡುವೆ

ದೂರದ ಕಣಿವೆಯ ನಡುವೆ,
ನಿಂತಿಹ ನನ್ನ ಒಲವೆ,
ನಿನ್ನಯ ನೆನಪಲಿ ನಾನು,
ನನ್ನನೆ ಮರೆಯಲು ತೊಡಗಿರುವೆ!

ಒಮ್ಮೆ ನೋಡು ಇತ್ತ ತಿರುಗಿ,
ಕಾಯುತಿರುವೆ ನಾ ನಿನಗಾಗಿ
ಅಳುಕುತ ನಿಂತಿಹೆ ನಾನು
ಬಳುಕುತ ಬಾ ಬೇಗ ನೀನು.

ನಿನ್ನಯ ಕಾಂತಿಯ ಮುಂದೆ,
ಸೂರ್ಯನೂ ಸರಿದಿಹ ಹಿಂದೆ;
ನಿನ್ನೀ ಬೆಡಗನು, ಬೆರಗಲಿ ನೋಡುತ,
ನಿನ್ನ ಜೊತೆ ಸೇರಲು ನಾ ಬಂದೆ.

ನೀ ಓಡಲಾರೆ ನನ್ನ ಕಣ್ಮರೆಸಿ,
ನಾ ಬರುವುದೂ ಬೇಕಿಲ್ಲ ನಿನ್ನ ಹಿಂಬಾಲಿಸಿ,
ಕಾರಣ? ನೀನಿರುವುದು ನನ್ನ ಹೃದಯದಲ್ಲೇ!
ನೀನಾಗಿರುವಿಯಾಗಲೇ ನನ್ನ ಮನದರಸಿ 
ಪ್ರಣವ
28/05/2013
7:34 P.M  - 7:53 P.M


Friday, May 17, 2013

ಯಾರವಳು?





ಆಗಸದಲಿ ಹಾರುತಿರ್ಪ  ಪಕ್ಷಿಯಂತೆ,
ಸ್ವಚ್ಛಂದವಾಗಿ ಹಾರುತಿರ್ವುದೆನ್ನ ಮನವು!
ಆದರೊಂದು ಸಂಶಯವೆನ್ನ ಕಾಡುತಿರ್ವುದು,
ಹಾರುತಿದೆಯೋ ಇಲ್ಲ, ಕಳುವಾಗಿದೆಯೋ?

ಸಿಕ್ಕಿತಿದೋ ಉತ್ತರ, ಹಾರುತಿಲ್ಲವದು ಕಳುವಾಗಿದೆ,
ಅದು ಯಾವ ಪಟಚ್ಚರೆಯೋ ಕಾಣೆ ಕದ್ದೊಯ್ದಿರುವಳು
ಅವಳ ರೂಪ ಮಾತ್ರ ಮಾಸದು ನನ್ನೆದೆಯಾಳದಿಂದ,
ದಿವಿಜೆಯಂತಿರುವಳು, ಮರೆಯಲಾಗದೆನ್ನಿಂದ!

ಹಿಂದೆ ಕಂಡವಳಲ್ಲ, ಪರಿಚಿತಳಂತೂ ಅಲ್ಲವೇ ಅಲ್ಲ,
ಒಮ್ಮೆ ಕಂಡಾಗಲೇ ಕದ್ದಿರುವಳೆನ್ನ ಹೃದಯವನೆಂದ ಮೇಲೆ
ಊಹಿಸಿ ಆಕೆಯಿರಬಹುದಿನ್ನೆಂತಹ ಚೋರಿ!
ನನ್ನ ಮನವಾಯಿತು, ‘ಅಲೆದಾಡುವ  ಅಲೆಮಾರಿ

ಬಣ್ಣಿಸಲಿ ಹೇಗೆ  ಒಡನಾಟವನು?
ಮರೆಯಲಾಗದ ಆಕೆಯ ಕಣ್ಣೋಟವನು?
ಮಾಡಿರಬಹುದೆನ್ನಮೇಲಾಕೆಯು ಮಾಟವನು
ಮಾಡುತಿಲ್ಲ ನಾನ್ಯಾವುದೇ ನಾಟಕವನು
ಅವಳಿಗಿಲ್ಲ ಯಾರೂ ಸರಿಸಮ
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ

ನಿಮಗನಿಸಬಹುದು ಅತಿಶಯೋಕ್ತಿಯಿದೆಂದು
ಅಪಾರ್ಥಿಸಬೇಡಿ, ಅರಿಯಿರಿ ನನಗಿದೇ ಭುಕ್ತಿಯೆಂದು
ಅರ್ಥವಾಗದಿದ್ದರೆ ಕ್ಷಮಿಸಿ, ‘ಇವನ್ಯಾರೆನ್ನದೆ
ಕೋಪ ಬಂದರೆ ಬಯ್ಯಿರಿ ಕ್ಯಾರೆನ್ನದೆJ                   
                                                                                                            
                             - ಪ್ರಣವ

Thursday, May 16, 2013

ಎಲ್ಲಿರುವೆ........ ಮನವ ಕಾಡುವ........

                                    




ನಿನ್ನಾಗಮನವನು ಬಯಸುತಿದೆ ಮನ
ಮಾಧವ ಪರ್ವದಂದದಿ ಆಗಮಿಸು
ಹರ್ಷೋಲ್ಲಾಸದಿ ನರ್ತಿಸುವೆ ನಾ
ಕೋಗಿಲೆಯೇ, ಪ್ರೇಮರಾಗವನು ಬಿತ್ತರಿಸು;

ಕರ್ಣಾಕರ್ಣಿಕೆಯಲ್ಲವಿದು, ನನ್ನ ಮನದಾಳದ ಸತ್ಯ;
ವೈದೃಶ್ಯಳು ನೀನು, ನಿನ್ನಂತಿಲ್ಲ ಯಾರು
ಹೇಳಲಾಗದೆ ಪರದಾಡುತಿರುವೆನು,
ತ್ರಸ್ತನು ನಾನು, ಗರ್ಹಣಿಸದಿರು ನೀನು; 
ಬೆಳ್ಪ ನಾನೆಂದೆನಿಸಬಹುದು ನಿನಗೆ
ಅಹುದು, ಬೆಳ್ಪನೆ ನಾನು, ನಿನ್ನ ಪ್ರೇಮಪಾಶದೊಳಗೆ
ಸಮುಜ್ವಲ ಸತ್ಯವಿದು, ಮಿಥ್ಯವಲ್ಲವೀ ಪ್ರೇಮಾಂಕುರಗೀತೆ.

                                                                                                                     - ಪ್ರಣವ

                                                                                                                  16/05/2013


Tuesday, April 10, 2012

ಪ್ರಣವನ ಪ್ರಣಾಮ





ತರ್ಕಿಸಿಕೋ ನಿನ್ನ ನೀನೇ,
ತರ್ಕಿಸುವ ಮುನ್ನ ಬೇರೊಬ್ಬನನು,
ಅಂದು ನೀನಾಗುವೆ ಆತ್ಮಾವಲೊಕಿ,
ತಣಿವುದು ನಿನ್ನೊಳಗಿನ ದ್ವೇಷದ ಬೆಂಕಿ
ನೀಡು ದ್ವೇಷಾಸೂಯಕ್ಕೆ ಚಿರವಿರಾಮ
ಅಂದು ನಿನಗೆ ದೊರೆವುದುಪ್ರಣವನ ಪ್ರಣಾಮ

ಆ ದುಂಬಿಗಳ ಝೇಂಕಾರದಿಂದ,
ಮನವೆಂದಿತು, ‘ದೊರಕಿದೆ ಎನಗಿಂದು ವಿರಾಮ;
ನಾ ವಂದಿಸುವೆ ದುಂಬಿಗಳಿಗೆ ಆನಂದದಿಂದ
‘ನಿಮಗಿದೋ ಅರ್ಪಿಸುವೆ, ಪ್ರಣವನ ಪ್ರಣಾಮ.

ಚಂದಿರನ ಮೊಗದಲ್ಲಿ, ನಾ ಕಂಡೆ ರತಿಯ!
ನನಗನಿಸಿತುಆಕೆಯೂ ಕಾಣುತ್ತಿದ್ದಾಳೆ, ತನ್ನ ಪ್ರತಿಬಿಂಬವನು,
ನನ್ನ ಕಣ್ಣೆಂಬ ಕೊಳದಲ್ಲಿ, ಕೊರೆವ ಚಳಿಯಲ್ಲಿ.

ಮನಸೂರೆಗೊಂಡಳು ನನ್ನ ಚಿತ್ತವನು ಪೂರ್ತಿಯಾಗಿ
ಉಳಿಯಲಿಲ್ಲ ನನ್ನಲ್ಲಿ ಏನೂ ಅವಳನ್ನು ಬಿಟ್ಟು!
ಹಾಕಿಕೊಂಡೆ ನನಗೆ ನಾನೇ ಒಂದು ಅಲ್ಪವಿರಾಮ,
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ.

ಕೊರೆವ ಚಳಿಯಲ್ಲಿ, ತೊರೆಯ ತಂಪು ಮಂಜಿನಂತೆ;
ಉರಿವ ಬಿಸಿಲಲ್ಲಿ, ಉರಿಬೆಂಕಿಯಿಟ್ಟಂತೆ;
ಸುರಿವ ಮಳೆಯಲ್ಲಿ, ಭೋರ್ಗರೆವ ಪ್ರವಾಹದಂತೆ
ಲಗ್ಗೆಯಿಟ್ಟಳು ನನ್ನ ಮನಕ್ಕೆ, ಕಾಣದ ಮೊಗದಂತೆ, ಕೈಗೆಟುಕದ ಪುಷ್ಪದಂತೆ.
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ,
ಬಯ್ಯದಿರಿ ನನಗೆ, “ಅಯ್ಯೋ ರಾಮ ರಾಮ                                                                                                  - ಪ್ರಣವ, 18/03/2012


Saturday, March 31, 2012

ಗುರುಚರಣದೊಳ್ ದೊರೆವುದು ಮುಕುತಿ


ಕಣ್ಣಂಚಿನಲಿ ಸುಳಿದಾಡುತಿವೆ ಹಲವು ಕಾಮನೆಗಳು
ಸಿದ್ಧಿಯಾಗಲವು ಬೇಡು ಗುರುವಿನ ಚರಣದೊಳು
ನಂಬಿಕೆಯಿಡು ಶ್ರೀಧರನ ಪಾದದೊಳು
ಇಷ್ಟಾರ್ಥ ಈಡೇರ್ವುದು ಮುಚ್ಚಿತೆರೆಯುವುದರೊಳಗೆ ಕಣ್ಣ ಪಟಲಗಳು


ಗುರುವಿನಾದೇಶ ಸಿಗುವರೆಗಿಲ್ಲ ಮುಕುತಿ
ಅವನೊಳಿಡು ಅನಂತ ಭಕುತಿ
ಕೊನೆಗೊಂದು ದಿವಸವದು ದೊರೆವುದಪ್ಪಣೆ
ಅಂದು ಆಗಿರುವುದು ನಿನ್ನ ಮನದರ್ಪಣೆ
                                                       ಪ್ರಣವ 24/03/2012                  
                                                     11:11 P.M. to 11:35 P.M. 


ಮುಸ್ಸಂಜೆಯ ಮರ್ಮ


ಬೀಸುತಿತ್ತು ತಂಗಾಳಿ ಮೆಲ್ಲಗೆ
ಮರೆಯಾಗುತಿದ್ದ ರವಿ ಕಾಣದೆ ಕಣ್ಣಿಗೆ
ಪದ ಹಾಡಿತು ಮನವು, ತಾಳವಿಲ್ಲದೆ
ಸ್ಮೃತಿ ತಪ್ಪಿತು ನನಗೆ ನೀನಿಲ್ಲದೆ



ದೂರದ ಹಸಿರು ಬೆಟ್ಟ,
ತೋರುತಿತ್ತು ಕತ್ತಲಲ್ಲಿ ಕಪ್ಪಾಗಿ!
ಅಂದು ನೀ ಮನದಲ್ಲಿ ನೆಟ್ಟ,
ಪ್ರೇಮಬೀಜವೊಡೆದು, ಹೂ ನೀಡಿತು, ಕೊಡಲು ನಿನಗಾಗಿ
ಪ್ರಣವ 09/04/2012