Tuesday, May 28, 2013

ದೂರದ ಕಣಿವೆಯ ನಡುವೆ

ದೂರದ ಕಣಿವೆಯ ನಡುವೆ,
ನಿಂತಿಹ ನನ್ನ ಒಲವೆ,
ನಿನ್ನಯ ನೆನಪಲಿ ನಾನು,
ನನ್ನನೆ ಮರೆಯಲು ತೊಡಗಿರುವೆ!

ಒಮ್ಮೆ ನೋಡು ಇತ್ತ ತಿರುಗಿ,
ಕಾಯುತಿರುವೆ ನಾ ನಿನಗಾಗಿ
ಅಳುಕುತ ನಿಂತಿಹೆ ನಾನು
ಬಳುಕುತ ಬಾ ಬೇಗ ನೀನು.

ನಿನ್ನಯ ಕಾಂತಿಯ ಮುಂದೆ,
ಸೂರ್ಯನೂ ಸರಿದಿಹ ಹಿಂದೆ;
ನಿನ್ನೀ ಬೆಡಗನು, ಬೆರಗಲಿ ನೋಡುತ,
ನಿನ್ನ ಜೊತೆ ಸೇರಲು ನಾ ಬಂದೆ.

ನೀ ಓಡಲಾರೆ ನನ್ನ ಕಣ್ಮರೆಸಿ,
ನಾ ಬರುವುದೂ ಬೇಕಿಲ್ಲ ನಿನ್ನ ಹಿಂಬಾಲಿಸಿ,
ಕಾರಣ? ನೀನಿರುವುದು ನನ್ನ ಹೃದಯದಲ್ಲೇ!
ನೀನಾಗಿರುವಿಯಾಗಲೇ ನನ್ನ ಮನದರಸಿ 
ಪ್ರಣವ
28/05/2013
7:34 P.M  - 7:53 P.M


Friday, May 17, 2013

ಯಾರವಳು?





ಆಗಸದಲಿ ಹಾರುತಿರ್ಪ  ಪಕ್ಷಿಯಂತೆ,
ಸ್ವಚ್ಛಂದವಾಗಿ ಹಾರುತಿರ್ವುದೆನ್ನ ಮನವು!
ಆದರೊಂದು ಸಂಶಯವೆನ್ನ ಕಾಡುತಿರ್ವುದು,
ಹಾರುತಿದೆಯೋ ಇಲ್ಲ, ಕಳುವಾಗಿದೆಯೋ?

ಸಿಕ್ಕಿತಿದೋ ಉತ್ತರ, ಹಾರುತಿಲ್ಲವದು ಕಳುವಾಗಿದೆ,
ಅದು ಯಾವ ಪಟಚ್ಚರೆಯೋ ಕಾಣೆ ಕದ್ದೊಯ್ದಿರುವಳು
ಅವಳ ರೂಪ ಮಾತ್ರ ಮಾಸದು ನನ್ನೆದೆಯಾಳದಿಂದ,
ದಿವಿಜೆಯಂತಿರುವಳು, ಮರೆಯಲಾಗದೆನ್ನಿಂದ!

ಹಿಂದೆ ಕಂಡವಳಲ್ಲ, ಪರಿಚಿತಳಂತೂ ಅಲ್ಲವೇ ಅಲ್ಲ,
ಒಮ್ಮೆ ಕಂಡಾಗಲೇ ಕದ್ದಿರುವಳೆನ್ನ ಹೃದಯವನೆಂದ ಮೇಲೆ
ಊಹಿಸಿ ಆಕೆಯಿರಬಹುದಿನ್ನೆಂತಹ ಚೋರಿ!
ನನ್ನ ಮನವಾಯಿತು, ‘ಅಲೆದಾಡುವ  ಅಲೆಮಾರಿ

ಬಣ್ಣಿಸಲಿ ಹೇಗೆ  ಒಡನಾಟವನು?
ಮರೆಯಲಾಗದ ಆಕೆಯ ಕಣ್ಣೋಟವನು?
ಮಾಡಿರಬಹುದೆನ್ನಮೇಲಾಕೆಯು ಮಾಟವನು
ಮಾಡುತಿಲ್ಲ ನಾನ್ಯಾವುದೇ ನಾಟಕವನು
ಅವಳಿಗಿಲ್ಲ ಯಾರೂ ಸರಿಸಮ
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ

ನಿಮಗನಿಸಬಹುದು ಅತಿಶಯೋಕ್ತಿಯಿದೆಂದು
ಅಪಾರ್ಥಿಸಬೇಡಿ, ಅರಿಯಿರಿ ನನಗಿದೇ ಭುಕ್ತಿಯೆಂದು
ಅರ್ಥವಾಗದಿದ್ದರೆ ಕ್ಷಮಿಸಿ, ‘ಇವನ್ಯಾರೆನ್ನದೆ
ಕೋಪ ಬಂದರೆ ಬಯ್ಯಿರಿ ಕ್ಯಾರೆನ್ನದೆJ                   
                                                                                                            
                             - ಪ್ರಣವ

Thursday, May 16, 2013

ಎಲ್ಲಿರುವೆ........ ಮನವ ಕಾಡುವ........

                                    




ನಿನ್ನಾಗಮನವನು ಬಯಸುತಿದೆ ಮನ
ಮಾಧವ ಪರ್ವದಂದದಿ ಆಗಮಿಸು
ಹರ್ಷೋಲ್ಲಾಸದಿ ನರ್ತಿಸುವೆ ನಾ
ಕೋಗಿಲೆಯೇ, ಪ್ರೇಮರಾಗವನು ಬಿತ್ತರಿಸು;

ಕರ್ಣಾಕರ್ಣಿಕೆಯಲ್ಲವಿದು, ನನ್ನ ಮನದಾಳದ ಸತ್ಯ;
ವೈದೃಶ್ಯಳು ನೀನು, ನಿನ್ನಂತಿಲ್ಲ ಯಾರು
ಹೇಳಲಾಗದೆ ಪರದಾಡುತಿರುವೆನು,
ತ್ರಸ್ತನು ನಾನು, ಗರ್ಹಣಿಸದಿರು ನೀನು; 
ಬೆಳ್ಪ ನಾನೆಂದೆನಿಸಬಹುದು ನಿನಗೆ
ಅಹುದು, ಬೆಳ್ಪನೆ ನಾನು, ನಿನ್ನ ಪ್ರೇಮಪಾಶದೊಳಗೆ
ಸಮುಜ್ವಲ ಸತ್ಯವಿದು, ಮಿಥ್ಯವಲ್ಲವೀ ಪ್ರೇಮಾಂಕುರಗೀತೆ.

                                                                                                                     - ಪ್ರಣವ

                                                                                                                  16/05/2013