ಇದನ್ನು ಓದಲೇಬೇಕು





ಎಲ್ಲರಿಗೂ ಪ್ರಣವನ ಪ್ರಣಾಮಗಳು 


ನನ್ನ ಮನಸ್ಸಿನಲ್ಲಿರುವ, ಅಭಿರಾಮವಾದ, ಶೃಂಖಲೆಯಂತೆ ಸುತ್ತಿಕೊಂಡಿರುವ, ಭಾವನೆಗಳನ್ನೂ, ಕನಸುಗಳನ್ನೂ ನನಸಾಗಿಸಲು ಸಾಧ್ಯವಾಗದಿದ್ದರೂ, ಅವುಗಳನ್ನು ನನ್ನ ಪದಶ್ರಾವ್ಯಗಳ ಮೂಲಕ, ಯಾವಜ್ಜೀವವಾಗಿ ಅಜರಾಮರಗೊಳಿಸುವ ಬಯಕೆ ನನ್ನದು. ಆದರೆ, ಶ್ರಾವಕರಾದ ನಿಮಗೆ, ನನ್ನ ಪದಗುಚ್ಛಗಳ ಪ್ರಯೋಗ ಅಸಮಂಜಸವಾಗಿ ಕಂಡುಬಂದಲ್ಲಿ, ದಯಮಾಡಿ ಕ್ಷಮಿಸಬೇಕಾಗಿ ಕೋರುತ್ತೇನೆ.


ಮನದಲ್ಲಿ ಭಾವನೆಗಳು, ಕನಸುಗಳು ಅಗುಂತಿ (ಅಧಿಕ) ಯಾಗಿದ್ದರೂ ಸಹ, ಅವುಗಳನ್ನು ವಿವರಿಸಲಾಗದೆ ದಿಙ್ಮೂಢನಾದ ಸಂದರ್ಭದಲ್ಲಿ, ಮಾನವನಾದವನು ಕವಿತಾಮಾರ್ಗವನ್ನು ಹಿಡಯುವುದು ಸಹಜ. ನಾನೂ ಅಂತೆಯೇ ಮಾರ್ಗವನ್ನು ಹಿಡಿದಿರುವುದು.


ಮನದ ದೀರ್ಘಿಕದಲ್ಲಿ ಈಜುತ್ತಿರುವ ಜಲಚರಗಳಂತಿರುವ ಭಾವನೆಗಳಿಗೆ, ಒಂದು ಸುಂದರವಾದ ರೂಪ ನೀಡಲು ಕವಿತಾಧ್ವವನ್ನು ಬಿಟ್ಟು ಬೇರೆ ಯಾವುದೇ ಪರಿಯಲ್ಲಿಯೂ ಮೂರ್ತಿಮಂತಗೊಳಿಸಲು ಸಾಧ್ಯವಿಲ್ಲವೆಂಬುದು ನನ್ನ ಅನುಭವಕ್ಕೆ ಬಂದಿರುವ ಸಂಗತಿ. ಆದರೂ ಕೆಲವೊಮ್ಮೆ ಪ್ರಸಕ್ತ ವಿಧ್ಯಮಾನಗಳ ಬಗ್ಗೆಯೂ ಲೇಖನಗಳನ್ನು ಬರೆಯುತ್ತಿರಬೇಕೆಂದಿದ್ದೇನೆ


ಆದರೆ ಇಲ್ಲಿ ನಾನು ಕೇವಲ ನನ್ನ ಭಾವನೆಗಳಿಗಾಗಲೀ, ಕನಸುಗಳಿಗಾಗಲೀ ಸೀಮಿತವಾಗಿರದೆ, ನನ್ನ ಕಲ್ಪನೆಗಳಿಗೂ ರೂಪನೀಡುವ ಪ್ರಯತ್ನವನ್ನು ಮಾಡಿದ್ದೇನೆ. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೋ ಇಲ್ಲವೋ ನಾ ತಿಳಿಯೆ. ಆದರೆ ನನ್ನ ಕವಿತೆಗಳು ನಿಮ್ಮ ಮನಕ್ಕೆ ಮುದ ನೀಡಿದರೆ, ನನಗೆ ಅಷ್ಡೇ ಸಾಕು J


ನಾನು ಇಲ್ಲಿ ರೂಪಿಸಿರುವ (ಮುಂದೆಯೂ ರೂಪಿಸಲಿರುವ) ಕನ್ಯೆ ಯಾರೆಂದು ನಿಮಗೇನಾದರೂ ಸಂದೇಹ ಬಂದ ಪಕ್ಷದಲ್ಲಿ ಸಂದೇಹವನ್ನು ಪರಿಹರಿಸಬೇಕಾದ್ದು ನನ್ನ ಕರ್ತವ್ಯವಾಗಿರುವುದರಿಂದ, ಮೊದಲೇ ತಿಳಿಸಿಬಿಡುತ್ತೇನೆ. ಹಿಂದೆಯೂ ತಿಳಿಸಿರುವಂತೆ ನಾನು ಇಲ್ಲಿ ಕೇವಲ ನನ್ನ ಭಾವನೆ, ಕನಸು, ಕಲ್ಪನೆಗಳಿಗಷ್ಟೇ ಅವಧಾರಣೆ ನೀಡಿರುವುದು. ನೈಜತೆಯಲ್ಲಿ ನಾನು ಯಾರನ್ನೂ ನೆನೆಸಿಕೊಂಡು ಕವಿತೆಗಳಿಗೆ ಜೀವ ಕೊಟ್ಟಿರುವುದಿಲ್ಲ.


ಕ್ಷಿತಿಜದಲ್ಲಿ ಬೆಳಗುವ ತಿಗ್ಮಕರನು, ಬೆಳದಿಂಗಳನು ಸೂಸುವ ಚಂದ್ರನು, ಮಿರಮಿರನೆ ಮಿಂಚುವ ಚುಕ್ಕಿತಾರೆಗಳು ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುವುದಷ್ಟೇ ಅಲ್ಲದೇ, ಹಲವು ಕವಿತಾಕಲ್ಪನ ಶಕ್ತಿಗಳಿಗೆ, ಕಾರಣಿಭೂತವಾಗಿವೆ. ಅಲ್ಲದೇ ಮುಂಜಾವಿನಲಿ ದಿನಕರನು ಉದಯಿಸುವ ಹೊತ್ತಿನಲ್ಲಿ ಅಂತೆಯೇ, ಮುಸ್ಸಂಜೆಯಲಿ ಅಸ್ತಂಗತನಾಗಿ ಶೇಖರನಿಗೆ ದಾರಿ ಬಿಟ್ಟು ಕತ್ತಲಲ್ಲಿ ಕಣ್ಮರೆಯಾಗುವ ಹೊತ್ತಿನಲ್ಲಿ, ಶರ್ವರಿಯ ಶಾಂತತೆಯಲ್ಲಿ, ಸುಂದರ ಕವಿತೆಗಳ ಉಗಮವಾಗುತ್ತದೆ. ಇಂತಹ ಕವಿತೆಗಳ ಜನನಕ್ಕೆ ಮೂಲ ಕಾರಣೀಕರ್ತೆ ನಿಸರ್ಗ. ನಿಸರ್ಗದ ಸೌಂದರ್ಯಕ್ಕೆ ಸಾಟಿಯೇ ಇಲ್ಲ. ಕವನಗಳ ಹುಟ್ಟುವಿಕೆಗೆ ಕಾರಣಳಾದ ಮಾತೆಗೆ ವಂದಿಸುತ್ತಾ ಕವಿಕವನಕಲಾರಸಿಕ ನಾಗುವತ್ತ ಮೊದಲ ಹೆಜ್ಜೆಯನ್ನಿಡುತ್ತಿದ್ದೇನೆJ


ಮನದ ಕಲ್ಪನೆ, ಪರಿಕಲ್ಪನೆಗಲಿಗಿಲ್ಲ ನಿರ್ಧಿಷ್ಟ ಗಡುವು

ತಿಳಿದಂತೆ ಬರೆಯುತಿರುವೆ, ದೊರೆತಾಗ ಬಿಡುವು

ಇದನ್ನೋದಿ ನಿಮಗೆ ದೊರೆತರೆ ಉಲ್ಲಾಸ

ನನಗದುವೇ ನಿಮ್ಮಿಂದ ದೊರೆವ ಬಹುದೊಡ್ಡ ಕಾಣಿಕೆ

ಬಂದರೆ ನನ್ನ ಕವಿತೆಗಳಿಗೆ ಸ್ವಲ್ಪವಾದರೂ ಬೇಡಿಕೆ

ನಾನಾಗುವೆ ಕವಿತೆಗಳ, ಮೇಲಾಗಿ ಕನ್ನಡಾಂಬೆಯ ದಾಸ


                                 

1 comment:

  1. ನೀ ನಿನ್ನ ಏನು ಅಂದುಕೊಂಡಿದ್ಯೋ ನಾ ಕಾಣೆ, ಆದರೆ ಎಲ್ಲರೂ ಬೇರೆಯವರ ಭಾವದ ಬಗ್ಗೆ ಒಂದು ನಿರ್ಧಾರ ತಳೆಯಲು ಒದ್ದಾಡಿದರೆ, ನೀನು, ನಿನ್ನ ಬಗ್ಗೆ, ನಿನ್ನ ವಿಚಾರಗಳ ಬಗ್ಗೆ ರೂಪ ಕೊಡಲು ಒದ್ದಾಡುತ್ತಿರುವೆ... ದೊಡ್ಡ ದೊಡ್ಡವರ ಮಾತಿನಂತೆ ಆಗಿದ್ದೆ ಹೌದಾದಲ್ಲಿ ನಿನ್ನ ಆ ಮುಂದಿನ (ಎಂದೆಂದಿಗಿನ) ಕನಸಿನ ರಾಣಿ ಬಹಳೇ ಅದೃಷ್ಟವಂತಳು... ನಿನ್ನ ನೀ ಅರಿಯಲು ಹೊರಟಿರುವೆ, ಶುಭವಾಗಲಿ, ವಾರಕ್ಕೊಂದು ಕವಿತೆಯಿರಲಿ...

    ReplyDelete